ನಿಪ್ಪಾಣಿ - 
	ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿರುವ ಒಂದು ಪಟ್ಟಣ. ಹೋಬಳಿ ಕೇಂದ್ರ. ಮಹಾರಾಷ್ಟ್ರ ಗಡಿಯ ಬಳಿ, ಚಿಕ್ಕೋಡಿಯ ಪಶ್ಚಿಮಕ್ಕೆ 24 ಕಿಮೀ. ಮತ್ತು ಬೆಳಗಾಂವಿಯ ಉತ್ತರಕ್ಕೆ 72 ಕಿಮೀ. ದೂರದಲ್ಲಿ, ಸಮುದ್ರ ಮಟ್ಟದಿಂದ 607 ಮೀ. ಎತ್ತರದಲ್ಲಿ ಇದೆ. ಜನಸಂಖ್ಯೆ 58,061 (2001). ಜನಸಂಖ್ಯೆಯ ದೃಷ್ಟಿಯಿಂದ ಇದಕ್ಕೆ ಜಿಲ್ಲೆಯಲ್ಲಿ ಎರಡನೆಯ ಸ್ಥಾನ.

	ಚಿಕ್ಕೋಡಿ ತಾಲ್ಲೂಕಿನ ಪಶ್ಚಿಮದ ಅಂಚನ್ನು ವಲ್ಲಾಡ (ಮಲೆನಾಡಿನ) ಸೆರಗೆಂದು ಕರೆಯಲಾಗಿದೆಯಾದರೂ ಈ ತಾಲ್ಲೂಕಿನ ಬಹುಭಾಗ ಗಡಿನಾಡಿನಲ್ಲಿ-ಮಲೆನಾಡು ಹಾಗೂ ಬೆಳವಲನಾಡುಗಳ (ಬಯಲು ನೆಲ) ಮಧ್ಯದಲ್ಲಿ-ಇದೆ. ನಿಪ್ಪಾಣಿ ಗಡಿನಾಡಿನಲ್ಲಿದೆ.

	ಕೃಷಿ ಇಲ್ಲಿಯ ಜನರ ಮುಖ್ಯ ಉದ್ಯೋಗ. ಮಳೆಯ ಜೊತೆಗೆ, ಕೆರೆ ಬಾವಿಗಳ ಹಾಗೂ ಬಳಿಯಲ್ಲೆ ಹರಿಯುವ ನಿಪ್ಪಾಣಿ ಹಳ್ಳದ ನೀರಾವರಿಯನ್ನು ಅದು ಅವಲಂಬಿಸಿವೆ. ಬತ್ತ, ಚನ್ನಂಗಿ, ಬಟಗಡಲೆ, ಎಳ್ಳು, ಔಡಲ, ಸಾಸಿವೆ, ಕಬ್ಬು, ಹತ್ತಿ, ಮೆಣಸಿನಕಾಯಿ, ತಂಬಾಕು ಇವು ಈ ಸುತ್ತಿನ ಮುಖ್ಯ ಬೆಳೆಗಳು. ನಿಪ್ಪಾಣಿ ತಂಬಾಕಿಗೆ ಪ್ರಸಿದ್ಧವಾಗಿದೆ. ನಿಪ್ಪಾಣಿ ಒಂದು ಪ್ರಮುಖ ವ್ಯಾಪಾರಸ್ಥಳ. ತಂಬಾಕು, ಬೆಲ್ಲ ಮತ್ತು ಮೆಣಸಿನಕಾಯಿ ಇಲ್ಲಿಯ ಮುಖ್ಯ ವ್ಯಾಪಾರ ಸರಕುಗಳು. ದನಗಳ ವ್ಯಾಪಾರವೂ ನಡೆಯುತ್ತದೆ. ಬೀಡಿ ಕಟ್ಟುವ ಉದ್ಯಮ ಸಾಕಷ್ಟು ಬೆಳೆದಿದೆ. ಇಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಕಾರ್ಖಾನೆಯಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಈ ಊರಿನ ಮೂಲಕ ಸಾಗುತ್ತದೆ. ಇಲ್ಲಿಂದ ಸಂಕೇಶ್ವರ, ಹುಕ್ಕೇರಿ, ಗೋಕಾಕ, ಯರಗಟ್ಟಿ, ಸವದತ್ತಿಗಳ ಮೇಲಿಂದ ದಾರವಾಡಕ್ಕೆ ಮುಟ್ಟುವ ರಸ್ತೆಯೊಂದಿದೆ. ಜಿಲ್ಲೆಯ ಹಾಗೂ ಹೊರಗಿನ ಇತರ ಪ್ರಮುಖ ಸ್ಥಳಗಳಿಗೂ ರಸ್ತೆ ಸಂಪರ್ಕವುಂಟು.

	ಪಟ್ಟಣದ ಆಡಳಿತಕ್ಕೆ ಪೌರಸಭೆ ಇದೆ. ಧರ್ಮಶಾಲೆ, ಗ್ರಂಥಾಲಯ, ಶಾಲೆ ಕಾಲೇಜುಗಳು, ಆಸ್ಪತ್ರೆ ಮುಂತಾದವು ಇವೆ. ರಕ್ಷಿತ ನೀರಿನ ಸರಬರಾಜು ಕಡಿಮೆ.

	ನಿಪ್ಪಾಣಿಯ ಬಗ್ಗೆ ಮೊಟ್ಟಮೊದಲ ಉಲ್ಲೇಖ ಲಭ್ಯವಿರುವುದು 1800ರಲ್ಲಿ. ಸಿದ್ದೋಜಿರಾವ್ ನಿಂಬಾಳ್ಕರ್ ಅದರ ದೇಸಾಯಿಯಾಗಿದ್ದ. ಇವನು ಅಪ್ಪಾಸಾಹೇಬ್ ಎಂದು ಪ್ರಸಿದ್ದನಾಗಿದ್ದ. ಇವನು ಆ ಕಾಲದ ಅನೇಕ ಕದನಗಳಲ್ಲಿ ಪಾಲ್ಗೊಂಡಿದ್ದ. ಈತ ಕಾಮುಕನೂ ಆಗಿದ್ದನೆಂದೂ ಅನೇಕರನ್ನು ಸೆರೆಯಲ್ಲಿಟ್ಟಿದ್ದನೆಂದೂ ಹೇಳಲಾಗಿದೆ. ಆದರೆ ಇಂಗ್ಲಿಷರೊಂದಿಗೆ ಗಂಭೀರವಾಗಿ ನಡೆದುಕೊಳ್ಳುತ್ತಿದ್ದನೆಂದೂ ಸಾಮಾನ್ಯವಾಗಿ ಇಂಗ್ಲಿಷರು ಇವನಿಗೆ ಬೆಂಬಲವಾಗಿದ್ದರೆಂದೂ ಅವರು ಇವನ ಶೌರ್ಯವನ್ನು ಮೆಚ್ಚಿಕೊಂಡಿದ್ದರೆಂದೂ ತಿಳಿದುಬರುತ್ತದೆ. ಇವನಿಗೆ ಮುಪ್ಪು ಬಂದಾಗ ವಿಧವೆಯೊಬ್ಬಳ ಮಗುವನ್ನು ತನ್ನ ಪತ್ನಿಯರಲ್ಲೊಬ್ಬಳ ಮಗುವೆಂದು ಹೇಳಿ ಅದನ್ನು ತನ್ನ ಉತ್ತರಾಧಿಕಾರಿಯಾಗಿ ಮಾಡಲು ಯತ್ನಿಸಿದನೆಂದೂ ತನ್ನ ಹಂಚಿಕೆಯನ್ನು ಸಾಧಿಸಲು ಆ ವಿಧವೆಯನ್ನು ಕೊಲ್ಲಿಸಿದನೆಂದೂ ಹೇಳಲಾಗಿದೆ. ಆದರೆ 1839ರಲ್ಲಿ ದೇಸಾಯಿ ತೀರಿಕೊಂಡ. ತನ್ನ ಮಲಸೋದರನಾದ ರಘುನಾಥರಾಯನ ಮಗ ಮುರಾರರಾಯನನ್ನು ಇವನು ದತ್ತು ತೆಗೆದುಕೊಂಡಿದ್ದ. ಇಂಗ್ಲಿಷರು ಇವನ ಸರಂಜಾಮನ್ನು ವಶಪಡಿಸಿಕೊಂಡು ಬೆಳಗಾಂವಿ, ಧಾರವಾಡ ಮತ್ತು ಷೋಲಾಪುರಗಳಿಗೆ ಸೇರಿಸಿದರು. ನಿಪ್ಪಾಣಿ ಬೆಳಗಾಂವಿಗೆ ಸೇರಿತು. ಮುರಾರರಾಯ ಸಿದ್ದೋಜಿರಾಯನ ಹಿರಿಯ ರಾಣಿಯ ವಶದಲ್ಲಿದ್ದ. ಇತರ ರಾಣಿಯರಿಗೂ ಅವಳಿಗೂ ಈ ವಿಚಾರದಲ್ಲಿ ಜಗಳ ಹುಟ್ಟಿತು. ಹಿರಿಯ ರಾಣಿ ತೀರಿಕೊಂಡಾಗ ಉಳಿದವರು ರಘುನಾಥರಾಯನನ್ನು ಆಹ್ವಾನಿಸಿ, ಅವನು ತನ್ನ ಮಗನನ್ನು ವಶಪಡಿಸಿಕೊಳ್ಳಬೇಕೆಂದು ಕೋರಿದರು. 300 ಮಂದಿ ಅರಬರ ನೆರವಿನಿಂದ ಇದಕ್ಕೆ ಪ್ರಯತ್ನ ನಡೆಸಿದಾಗ ಇಂಗ್ಲಿಷರ ಸೈನ್ಯ ಪ್ರವೇಶಿಸಿ ಸಂಚನ್ನು ಅಡಗಿಸಿತು. ದೇಸಾಯಿಯ ವೆಚ್ಚದಲ್ಲಿ ಕೋಟೆಯ ರಕ್ಷಣಾ ವ್ಯವಸ್ಥೆಯನ್ನು ಕೆಡವಲಾಯಿತು. ಈ ಬಂಡಾಯದ ಯತ್ನದಲ್ಲಿ ಸೇರಿದ್ದವರು ತಮ್ಮ ವರ್ಷಾಶನ ಕಳೆದುಕೊಂಡರು.
(ವಿ.ಕೆಯುಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ